Pages

Showing posts with label ದಾಸ ಸಾಹಿತ್ಯ. Show all posts
Showing posts with label ದಾಸ ಸಾಹಿತ್ಯ. Show all posts

ನಾನೇನು ಕೊಡಲಿ ನಾಗಶಯನನಿಗೆ

Wednesday, 11 November 2020

ಸಾಹಿತ್ಯ-ಆನಂದದಾಸ


ನಾನೇನು ಕೊಡಲಿ ನಾಗಶಯನನಿಗೆ ।
ಹದಿನಾಲ್ಕು ಲೋಕಗಳ ಆಳುವೋ ಅರಸಗೆ ॥

ಸರ್ಪಶಯನನಿಗೆ ಸರ್ಪವೇಣಿಯ ಕೊಟ್ಟ ಸಾಗರರಾಜನು ಧನ್ಯನಾದನು ।
ಸಾಸಿರನಾಮದ ಶ್ರೀರಾಮಚಂದ್ರಗೆ ಸ್ವಾದಿಷ್ಟ ಫಲ ಕೊಟ್ಟ ಶಬರಿ ಧನ್ಯಳು ॥೧॥

ಆದಿಮೂರುತಿಗೆ ಅಕಳಂಕಚರಿತಗೆ ಅವಲಕ್ಕಿಯನು ಕೊಟ್ಟ ಅಣ್ಣ ಸುದಾಮನು ।
ಅವನೇ ತನ್ನವನೆಂದು ಅರಳು ಮಲ್ಲಿಗೆ ಕೊಟ್ಟ ಅಬಲೆ ರಾಧೆಯು ಅತಿ ಧನ್ಯಳು ॥೨॥

ಅಸುರಸಂಹಾರಗೆ ಎಸೆಳ್ಹಸು ಕೂಸಿಗೆ ಹಾಲು ಕೊಟ್ಟ ಯಶೋದೆ ಧನ್ಯಳು ।
ಕಮಲೇಶ ಕೃಷ್ಣಗೆ ಹೃತ್ಕಮಲವ ಕೊಟ್ಟ ಕಮಲಾಸನೆಯು ಅತಿ ಧನ್ಯಳು ॥೩॥

Read more...

ಬಾರಯ್ಯ ಮನೆಗೆ, ರಂಗಯ್ಯ ನೀನು

Saturday, 28 December 2019

ಸಾಹಿತ್ಯ-ಪುರಂದರದಾಸ


ಬಾರಯ್ಯ ಮನೆಗೆ, ರಂಗಯ್ಯ ನೀನು ।
ಬಾರಯ್ಯ ಮನೆಗೆ, ಬಾಲಗೋಪಾಲ,
ಜಾರ ಚೋರ ಕೃಷ್ಣ, ಜಾನಕಿಪತಿ ರಾಮ ॥

ನಂದನಂದನ ನವನೀತಚೋರ ಕೃಷ್ಣ,
ಮಂದರೋದ್ಧರನೆ ಮಾಧವರಾಯ ರಾಮ ।
ಗೋಕುಲದಲ್ಲಿ ಗೋಪಿಯರ ಕೂಡಿ,
ಲೋಕ ನೋಡಲು ಅವರ ಕಾಕು ಮಾಡಿ ॥೧॥

ಹಳ್ಳಿಕೊಳ್ಳಿಯೊಳೆಲ್ಲಾ ಮೊಸರು ಹಾಲು ಬೆಣ್ಣೆ,
ಕೊಳ್ಳೆಯಾಡಿ ಗೋಪಿ ಮುಡಿಯನ್ನೇ ಪಿಡಿದ ಕೃಷ್ಣ ।
ಅನಂತಪದ್ಮನಾಭ ಅಪ್ರಮೇಯ ಹೃಷೀಕೇಶ,
ದಾನವಾಂತಕ ರಂಗ ದಶರಥಪುತ್ರ ರಾಮ ॥೨॥

ಪರಮಪವಿತ್ರ ರಾಮ ಭದ್ರಾಚಲಾಧೀಶ,
ವರದ ಶ್ರೀಪುರಂದರವಿಠ್ಠಲನೆ ರಾಮ ॥೩॥

Read more...

ಕರೆದರೆ ಬರಬಾರದೆ

Saturday, 2 March 2019

ಸಾಹಿತ್ಯ-ಆನಂದದಾಸ


ಕರೆದರೆ ಬರಬಾರದೆ ।
ವರಮಂತ್ರಾಲಯ ಪುರಮಂದಿರ ತವಚರಣಸೇವಕರು ಕರೆದಿರಲು ॥

ಹರಿದಾಸರು ಸುಸ್ವರ ಸಮ್ಮೇಳದಿ ।
ಪರವಶದಿ ಬಾಯ್ತೆರೆದು ಕೂಗಿರೆ ॥೧॥

ಪೂಶರಪಿತ ಕಮಲೇಶವಿಠಲನ ।
ದಾಸಾಗ್ರೇಸರು ಈ ಸಮಯದಲಿ ॥೨॥

Read more...

ರಾಮ ಎಂಬುವ ಎರಡು

Friday, 14 December 2018

ಸಾಹಿತ್ಯ-ಪುರಂದರದಾಸ


ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।
ಪಾಮರರು ತಾವೇನು ಬಲ್ಲಿರಯ್ಯ ॥

ರಾ ಎಂಬ ಮಾತ್ರದೊಳು ರಕ್ತ ಮಾಂಸದೊಳಿದ್ದ ।
ಆಯಸ್ಥಿತಗತವಾದ ಅತಿ ಪಾಪವನ್ನು ।
ಮಾಯವನು ಮಾಡಿ ಮಹರಾಯ ಮುಕ್ತಿ ಕೊಡುವ ।
ದಾಯವನು ವಾಲ್ಮೀಕಿ ಮುನಿಯೊಬ್ಬನೇ ಬಲ್ಲ ॥೧॥

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।
ಒತ್ತಿ ಒಳ ಪೋಗದಂತೆ ಕವಾಟವಾಗಿ ।
ಚಿತ್ತಕಾಯಂಗಳೆಲ್ಲ ಪವಿತ್ರ ಮಾಡುವ ಪರಿಯ ।
ಭಕ್ತವರ ಹನುಮಂತ ತಾನೊಬ್ಬನೇ ಬಲ್ಲ ॥೨॥

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।
ಪರಮ ವೇದಗಳೆಲ್ಲ ಪೊಗಳುತಿಹವು ।
ಸಿರಿಯರಸ ಪುರಂದರವಿಠಲ ನಿನ್ನಯ ನಾಮ ।
ಸಿರಿಕಾಶಿಯೊಳಗೀರ್ವೋ ಶಿವನೊಬ್ಬನೇ ಬಲ್ಲ ॥೨॥

Read more...

ಕಾಯಬೇಕೆನ್ನ ಗೋಪಾಲ

Friday, 20 July 2018

ಸಾಹಿತ್ಯ-ಪುರಂದರದಾಸ


ಕಾಯಬೇಕೆನ್ನ ಗೋಪಾಲ ।
ಒಂದುಪಾಯವನರಿಯೆನು ಭಕುತರ ಪಾಲ ॥

ಹಲವು ಜನ್ಮಗಳೆತ್ತಿ ಬಂದೆ,
ಮಾಯಾಬಲವೆಂಬುದರಯದೆ ಭವದೊಳು ನೊಂದೆ ।
ಬಲು ಭಯವಾಯಿತು ಮುಂದೆ,
ನೀನು ಸುಲಭನೆಂದು ಕೇಳಿ ಶರಣೆಂದೆ ತಂದೆ ॥೧॥

ವಿತ್ತದಳಗೆ ಮನವಿಟ್ಟು,
ನಿನ್ನ ಉತ್ತಮನಾಮದ ಸ್ಮರಣೆಯ ಬಿಟ್ಟು ।
ಮತ್ತನಾದೆ ಮತಿಗೆಟ್ಟು,
ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು ॥೨॥

ಉರುತರ ಪಾಪಂಗಳೆಲ್ಲ,
ಅನ್ಯ ನರರೇನ ಬಲ್ಲರು ಯಮಧರ್ಮ ಬಲ್ಲ ।
ನರಕಕ್ಕೆ ಒಳಗಾದೆನಲ್ಲ,
ಸಿರಿವರ ನಾರಾಯಣ ಪುರಂದರ ವಿಠ್ಠಲ ॥೩॥

Read more...

ಕರವ ಮುಗಿವೆ ಕಮಲನಯನ

Monday, 4 June 2018

ಸಾಹಿತ್ಯ-ಗೋವಿಂದಾಸ


ಕರವ ಮುಗಿವೆ ಕಮಲನಯನ ಕರುಣದಿಂದಲಿ ಪಾಲಿಸೋ ।
ಕರಿವರದ ಶ್ರೀಕಮಲನಾಭ ಕರೆದು ಎನ್ನನು ಮನ್ನಿಸೋ ॥

ಸ್ಮರಿಲರಿಯೆ ಸಿರಿಯರಮಣ ಪರಮಪಾವನ ಪಾದವ ।
ಸ್ಮರಣಜನಕ ಶರಧಿಶಯನ ಇರಿಸು ಎನ್ನೊಳು ಮೋಹವ ॥೧॥

ಬಂಧುಬಳಗ ಭೋಗಭಾಗ್ಯದಿಂದ ಸುಖವ ಕಾಣೆನೆ ।
ಬಂದ ಶೋಕ ಶಮನನೇ ಗೋವಿಂದದಾಸನ ಪ್ರಾಣನೇ ॥೨॥

Read more...

ನಾನು ನೀನು ಎನ್ನದಿರು

Sunday, 20 May 2018

ಸಾಹಿತ್ಯ-ಕನಕದಾಸ


ನಾನು ನೀನು ಎನ್ನದಿರು ಹೀನ ಮಾನವ ।
ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡೆಲೋ, ಪ್ರಾಣಿ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ ।
ಅನ್ನದಿಂದ ಬಂದ ಕಾಮ ನಿನ್ನದೇನೆಲೋ ।
ಕರ್ಣದಿಂದ ಬರುವ ಘೋಷ ನಿನ್ನದೇನೆಲೋ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೋ, ಪ್ರಾಣಿ ॥೧॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ।
ಜಾಲವಿದ್ಯೆ ಬಯಲು ಮಾಯೆ ನಿನ್ನದೇನೆಲೋ ।
ಕೀಲು ಜಡಿದ ಮರದ ಗೊಂಬೆ ನಿನ್ನದೇನೆಲೋ ।
ಲೋಲ ಆದಿಕೇಶವನ ಭಕ್ತನಾಗೆಲೋ ಪ್ರಾಣಿ ॥೨॥

Read more...

ಕೇಳನೋ ಹರಿ ತಾಳನೋ

Thursday, 10 May 2018

ಸಾಹಿತ್ಯ-ಪುರಂದರದಾಸ


ಕೇಳನೋ ಹರಿ ತಾಳನೋ ।
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ॥

ತಂಬೂರಿ ಮೊದಲಾದ ಅಖಿಲವಾದ್ಯಗಳಿದ್ದು,
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ,
ನಂಬಲಾರ ಈ ಡಂಭಕರ ಕೂಗಾಟ ॥೧॥

ನಾನಾಬಗೆಯ ರಾಗ ಭಾವ ತಿಳಿದು,
ಸ್ವರಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ,
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ॥೨॥

ಅಡಿಗಡಿಗಾನಂದಭಾಷ್ಪ ಪುಳಕದಿಂದ,
ನಡೆನುಡಿಗೆ ಶ್ರೀಹರಿ ಎನ್ನುತ
ದೃಢಭಕ್ತರೊಡಗೂಡಿ ಹರಿಕೀರ್ತನೆಯ ಪಾಡಿ,
ಕಡೆಗೆ ಪುರಂದರವಿಠಲ ಎಂದರೆ ಕೇಳ್ವ ॥೩॥

Read more...

ಗಜವದನ ಬೇಡುವೆ

Thursday, 19 April 2018

ಸಾಹಿತ್ಯ-ಪುರಂದರದಾಸ


ಗಜವದನ ಬೇಡುವೆ, ಗೌರಿ ತನಯ ।
ತ್ರಿಜಗವಂದಿತನೇ ಸುಜನರ ಪೊರೆವನೇ ॥

ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕವಾಹನ ಮುನಿಜನಪ್ರೇಮ ॥೧॥

ಮೋದದಿ ನಿನ್ನಯ ಪಾದವ ತೋರೋ,
ಸಾಧುವಂದಿತನೇ ಆದರದಿಂದಲಿ ।
ಸರಸಿಜನಾಭ ಶ್ರೀಪುರಂದರವಿಠಲನ,
ನಿರುತದಿ ನೆನೆವಂತೆ ನೀ ದಯಮಾಡೋ ॥೨॥

Read more...

ಗೋವಿಂದ ನಿನ್ನ ನಾಮವೇ ಚಂದ

Sunday, 18 February 2018

ಸಾಹಿತ್ಯ-ಪುರಂದರದಾಸ


ಗೋವಿಂದ ನಿನ್ನ ನಾಮವೇ ಚಂದ ।
ಸಾಧನ ಸಕಲವು ನಿನ್ನಾನಂದ ॥

ಅಣು ರೇಣು ತೃಣ ಕಾಷ್ಞ ಪರಿಪೂರ್ಣ ಗೋವಿಂದ ।
ನಿರ್ಮಲಾತ್ಮಕನಾಗಿ ಇರುವುದೇ ಆನಂದ ॥೧॥

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ।
ಈ ಪರಿ ಮಹಿಮೆಯ ತಿಳಿವುದೇ ಆನಂದ ॥೨॥

ಮಂಗಳ ಮಹಿಮ ಶ್ರೀಪುರಂದರವಿಠಲನು ।
ಹಿಂಗದೆ ದಾಸರ ಸಲಹೋದೇ ಆನಂದ ॥೩॥

Read more...

ನಾ ನಿನ್ನ ಧ್ಯಾನದೊಳು ಇರಲು ಸದಾ

Wednesday, 14 February 2018

ಸಾಹಿತ್ಯ-ಪುರಂದರದಾಸ


ನಾ ನಿನ್ನ ಧ್ಯಾನದೊಳು ಇರಲು ಸದಾ ।
ಮಿಕ್ಕ ಮಾನವರೇನು ಮಾಡುವರೋ ಗೋಪಾಲ ॥

ಮತ್ಸರಿಸಿದರೇನು ಮಾಡಲಾಕರು ಎನ್ನ
ಅಚ್ಯುತ ನಿನ್ನಯ ಕೃಪೆಯಿರಲು ।
ನಿತ್ಯವು ನಿನ್ನಯ ನಾಮವ ಜಪಿಸಲು
ಕಿಚ್ಚಿಗೆ ಇರುವೆ ಮುತ್ತುವವೇ ರಂಗ ॥೧॥

ಗಾಳಿಲಿ ಕುದುರೆ ವೈಯ್ಯಾರದಿ ತಿರುಗಲು
ಧೂಳದು ರವಿಗೆ ತಾ ಮುಸುಕುವದೇ ।
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿ ನಡುಗುವದೇ ಹೇಳೆಲೋ ರಂಗ ॥೨॥

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲು ಅವನ ವಶವಹುದೇ ।
ನಿನ್ನ ನಂಬಿದೆ ನೀ ಎನ್ನ ಸಲಹಬೇಕೋ
ಪನ್ನಗಶಯನ ಶ್ರೀಪುರಂದರವಿಠ್ಠಲ ॥೩॥

Read more...

बैरागी भैरव - ಮನ ಶುಧ್ಧಿ ಇಲ್ಲದಲೆ

Wednesday, 25 October 2017

ಸಾಹಿತ್ಯ-ಪುರಂದರದಾಸ



ಮನ ಶುಧ್ಧಿ ಇಲ್ಲದಲೆ ಮಂತ್ರದ ಫಲವೇನು,
ತನು ಶುಧ್ಧಿ ಇಲ್ಲದಲೆ ತೀರ್ಥದ ಫಲವೇನು ॥

ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ,
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ,
ಹೊರಗೆ ಮಿಂದು ಒಳಗೆ ಮೀಯದವರ ಕಂಡು,
ಬೆರಗಾಗಿ ನಗುತಿದ್ದ ನಮ್ಮ ಪುರಂದರ ವಿಠಲ ॥

Read more...

ಭಕುತ ಜನ ಮುಂದೆ ನೀನವರ ಹಿಂದೆ

Sunday, 8 October 2017

ಸಾಹಿತ್ಯ-ವಿಜಯದಾಸ


ಭಕುತ ಜನ ಮುಂದೆ ನೀನವರ ಹಿಂದೆ।
ಯುಕುತಿ ಕೈಗೊಳ್ಳದೋ ಗಯಾ ಗದಾಧರನೆ ॥

ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತಿರೆ,
ಕಟ್ಟಳೆಯಲಿ ಹರಿಗೋಲು ಹಾಕಿ ।
ನೆಟ್ಟನೆ ಆಚೆ ಈಚೆಗೆ ಹೋಗಿ ಬರುವಾಗ,
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೇ ? ॥೧॥

ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮಟೆ,
ನಿಸ್ಸಾಳೆ ನಾನಾವಾದ್ಯ ಘೋಷಣೆಗಳು ।
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ,
ಆಳು ಮುಂದಲ್ಲದೆ ಅರಸು ತಾ ಮುಂದೇ ? ॥೨॥

ಉತ್ಸವ ವಾಹನದಿ ಬೀದಿಯೊಳು ಮೆರೆಯುತಿರೆ,
ಸತ್ಸಂಗತಿಗೆ ಹರಿದಾಸರೆಲ್ಲ ।
ವತ್ಸಲ ಸಿರಿವಿಜಯವಿಠ್ಠಲ ವೆಂಕಟಾಧೀಶ,
ವತ್ಸ ಮುಂದಲ್ಲದೆ ಧೇನು ತಾ ಮುಂದೇ ? ॥೩॥

Read more...

ಭಂಡನಾದೆನು ನಾನು

Tuesday, 1 March 2016

ಸಾಹಿತ್ಯ-ಪುರಂದರದಾಸ


ಭಂಡನಾದೆನು ನಾನು ಸಂಸಾರದಿ ।
ಕಂಡೂ ಕಾಣದ ಹಾಗೆ ಇರಬಹುದೆ ಹರಿಯೆ ॥

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ ।
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ ॥೧॥

ನಾನಾವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ ।
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ ॥೨॥

ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟುಹೋಯ್ತು ।
ಉದ್ಧಾರಕ ಪುರಂದರವಿಠಲನ ತತ್ತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ ॥೩॥

Read more...

ಸಕಲ ಗ್ರಹಬಲ ನೀನೇ

ಸಾಹಿತ್ಯ-ಪುರಂದರದಾಸ


ಸಕಲ ಗ್ರಹಬಲ ನೀನೇ ಸರಸಿಜಾಕ್ಷ ।
ನಿಖಿಲರಕ್ಷಕ ನೀನೆ ವಿಶ್ವವ್ಯಾಪಕನೇ ॥

ರವಿ ಚಂದ್ರ ಬುಧ ನೀನೇ ರಾಹುಕೇತುವು ನೀನೇ
ಕವಿ ಗುರು ಶನಿಯು ಮಂಗಳನು ನೀನೇ ।
ದಿವರಾತ್ರಿಯು ನೀನೇ ನವವಿಧಾನವು ನೀನೇ
ಭವರೋಗಹರ ನೀನೇ ಭೇಷಜನು ನೀನೇ ॥೧॥

ಪಕ್ಷಮಾಸವು ನೀನೇ ಪರ್ವಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ ।
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ॥೨॥

ಋತುವತ್ಸರವು ನೀನೆ ಪ್ರತಿಯುಗಾದಿಯು ನೀನೇ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ ।
ಜಿತವಾಗಿ ಎನ್ನೊಡೆಯ ಪುರಂದರವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮಮಹಿಮನು ನೀನೇ ॥೩॥

Read more...

ಬದುಕಿದೆನು ಬದುಕಿದೆನು

ಸಾಹಿತ್ಯ-ಪುರಂದರದಾಸ


ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ।
ಪದುಮನಾಭನ ಪಾದದೊಲುಮೆ ಎನಗಾಯಿತು ॥

ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ।
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ॥೧॥

ಹರಿಯ ತೀರ್ಥಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ ।
ಹರಿದಾಸರು ಎನ್ನ ಬಂಧು ಬಳಗಾವಾದರು
ಹರಿಮುದ್ರೆ ಎನಗಾಭರಣವಾಯಿತು ॥೨॥

ಹಿಂದೆನ್ನ ಸಂತತಿಗೆ ಸಕಲಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು ।
ತಂದೆ ಪುರಂದರವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ॥೩॥

Read more...

ಏನು ಧನ್ಯಳೋ ಲಕುಮಿ

ಸಾಹಿತ್ಯ-ಪುರಂದರದಾಸ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ।
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ॥

ಕೋಟಿ ಕೋಟಿ ಭೃತ್ಯರಿರಲು, ಹಾಟಕಾಂಬರನ ಸೇವೆ ।
ಸಾಟಿಯಿಲ್ಲದೆ ಮಾಡಿ ಪೂರ್ಣನೋಟದಿಂದ ಸುಖಿಸುತಿಹಳು ॥೧॥

ಛತ್ರಚಾಮರ ವ್ಯಜನ ಪರಿಯಂಕ ಪಾತ್ರರೂಪದಲ್ಲಿ ನಿಂತು ।
ಚಿತ್ರಚರಿತನಾದ ಹರಿಯ | ನಿತ್ಯಸೇವೆ ಮಾಡುತಿಹಳು ॥೨॥

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ ।
ಸರ್ವವಂದ್ಯನಾದ ಪುರಂದರವಿಠಲನ್ನ ಸೇವಿಸುವಳೋ ॥೩॥

Read more...

ಕಂಡೆ ನಾ ಗೋವಿಂದನ

ಸಾಹಿತ್ಯ-ಪುರಂದರದಾಸ


ಕಂಡೆ ನಾ ಗೋವಿಂದನ ।
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ॥

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ ।
ಸಾಸಿರನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ॥೧॥

ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲಜನ ಮುನಿವಂದ್ಯನ ।
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ॥೨॥

ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತಜನ ರಕ್ಷಕನ ।
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ॥೩॥

Read more...

ಇನ್ನೂ ದಯೆ ಬಾರದೇ

ಸಾಹಿತ್ಯ-ಪುರಂದರದಾಸ


ಇನ್ನೂ ದಯೆ ಬಾರದೇ ದಾಸನ ಮೇಲೆ ।
ಪನ್ನಗಶಯನ ಶ್ರೀಪರಮಪುರುಷ ಹರಿಯೇ ॥

ನಾನಾದೇಶಗಳಲ್ಲಿ ನಾನಾಕಾಲಗಳಲ್ಲಿ
ನಾನಾಯೋನಿಗಳಲ್ಲಿ ನೆಲಿದು ಪುಟ್ಟಿ ।
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ ॥೧॥

ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ ।
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರವಿಠಲನ ದಾಸನ ಮೇಲೆ ॥೨॥

Read more...

ನಮ್ಮಮ್ಮ ಶಾರದೆ

ಸಾಹಿತ್ಯ-ಕನಕದಾಸ


ನಮ್ಮಮ್ಮ ಶಾರದೆ ಉಮಾಮಹೇಶ್ವರಿ, ನಿಮ್ಮೊಳಗಿಹನಾರಮ್ಮಾ ।
ಕಮ್ಮಗೋಲನವೈರಿ ಸುತನಾದ ಸೊಂಡಿಲ, ಹೆಮ್ಮೆಯ ಗಣನಾಥನೇ ॥

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ ।
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾಗಣನಾಥನೇ ॥೧॥

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ ।
ಪಟ್ಟದರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ॥೨॥

ರಾಶಿವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ ।
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ ॥೩॥

Read more...

Popular Posts