Pages

Showing posts with label ದೊಡ್ಡರಂಗೇಗೌಡ. Show all posts
Showing posts with label ದೊಡ್ಡರಂಗೇಗೌಡ. Show all posts

ನಮ್ಮೂರ ಮಂದಾರ ಹೂವೇ

Thursday, 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಗೀತ - ಅಶ್ವಥ್-ವೈದಿ
ಚಿತ್ರ-ಆಲೆಮನೆ


ನಮ್ಮೂರ ಮಂದಾರ ಹೂವೇ ।
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು ॥

ಕಣ್ಣಲ್ಲಿ ಕರೆದು
ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು
ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ
ಸೊಗಸಾದ ಕಾರಂಜಿ ಮಿಡಿದೆ ॥೧॥

ಒಡಲಾಳ ಮೊರೆದು
ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ
ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ
ಇನಿದಾದ ಆನಂದ ತಂದೆ ॥೨॥

Read more...

ಮಾತಾಡೆ ನೀರೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮಾತಾಡೆ ನೀರೆ ಮಾತಾಡೆ ।
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೆ , ಬಳಿಗೆ ಬರಬಾರದೆ ॥

ಸುಮ್ಮನೆ ಇದ್ದರೂ ಕೆಣಕುತ ಬಂದು
ಬಿಮ್ಮನೆ ಕುಳಿತರೂ ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೆ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರಪಿನ ಸಿಹಿ ಹಂಚಿ ಹರಿವಾಗ  ॥೧॥

ಹುಣ್ಣಿಮೆ ಮೂಡಲು ಕಣ್ಣೆವೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೆ
ಒಸಗೆಯ ಬಿಸಿ ತಾಕಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ ॥೨॥

Read more...

ಮೂಡುತ ರವಿ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೂಡುತ ರವಿ ರಂಗು ತಂದೈತೆ ।
ಓಡುತ ನದಿ ಹಾಡು ನೀಡೈತೆ
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ, ಗಾಳಿ ತೀಡೈತೆ ॥

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು ಒಟ್ಟಿಗೆ ಕೂಡೈತೆ ॥೧॥

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ ಸಂತೋಷ ಸವಿದೈತೆ ॥೨॥

Read more...

ಹೂದೋಟದ ಹಾದಿಯಾಗೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಹೂದೋಟದ ಹಾದಿಯಾಗೆ
ಊರಿನಾಚೆ ತೋಪಿನಾಗೆ ।
ತಂಗಾಳಿ ಬೀಸಿದ್ಹಾಂಗೆ
ಹೊಂಬಾಳೆಯು ತೂಗಿದ್ಹಾಂಗೆ
ನಿನ್ನ ಪ್ರೀತಿ ನೆನಪು ತಂದಿತೋ
ನಿಂತಲ್ಲೇ ಕನಸು ಕಂಡಿತೋ
ಬಾಳುವಾಸೆ ಮತ್ತೆ ಉಕ್ಕಿ ಬಂದಿತೋ ॥

ಮಾರಿಹಬ್ಬ ಮಾಡುವಾಗ ದಾರಿ ತಪ್ಪಿ ನಡೆದೆನೆಂದು
ಕೋಪಗೊಂಡು ಕೊಂಕನಾಡಿ ಸ್ನೇಹ ಕದಡಿತೋ
ಬೆಂದು ಹೋದ ಗದ್ದೆಯಾಗೆ ಹೊಸ ಪೈರು ಚಿಗುರಿದ್ಹಾಗೆ
ದಂಡಿ ದಂಡಿ ಆಸೆ ಉಕ್ಕಿ ಹಸಿರು ಮೂಡಿತೋ ॥೧॥

ಘಾಟಿ ಜಾತ್ರೆ ಕೂಡಿದಾಗ ನಿನಗೆ ಎರಡು ಬಗೆದೆನೆಂದು
ಶಾಪ ಹಾಕಿ ದೂರವಾಗಿ ಮನಸು ಒಡೆಯಿತೋ
ಬತ್ತಿಹೋದ ಹಳ್ಳದಾಗೆ ಮತ್ತೆ ನೀರು ಬಂದ ಹಾಗೆ
ಕೊಂಚ ಕೊಂಚ ಮೋಹವುಕ್ಕಿ ಒಸಗೆ ಕರೆಯಿತು ॥೨॥

Read more...

ಮೆರೆಯ ಬೇಡವೋ ಮನುಜ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೆರೆಯ ಬೇಡವೋ ।
ಮನುಜ, ಅಂತರಾಳದ ಅಂಕೆ ಮೀರಿ
ಕೊಂಕು ಬೀಗಿದೆ, ಸುಂಕ ಕಾದಿದೆ ॥

ನೀತಿ ಮೀರದೆ ನೀನು ಭ್ರಾಂತಿ ಕಾಣದೆ
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ
ಡಂಭಾಚಾರವು ಏಕೊ, ಏಕೋ
ಹುಂಬ ತೋರಿಕೆ ಏಕೋ, ಏಕೋ
ಸಹಜವಾಗಿ ಬಾಳಿ ಬದುಕಯ್ಯ ॥೧॥

ಡೌಲು ತೋರದೆ ಎಂದೂ ಕೇಡು ಹಂಚದೆ
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ
ಪೊಳ್ಳು ಜಂಭವು ಸಾಕೋ, ಸಾಕೋ
ಸುಳ್ಳು ವಂಚನೆ ಸಾಕೋ, ಸಾಕೋ
ಸ್ನೇಹದಿಂದ ಲೋಕ ನೋಡಯ್ಯಾ ॥೨॥

Read more...

ಈ ವಿರಹ ಕಡಲಾಗಿದೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಈ ವಿರಹ ಕಡಲಾಗಿದೆ ।
ನೀನಿರದೆ, ಇನಿದಾದ ಸನಿಹ ಸಿಗದೆ
ಸವಿನೆನಪೇ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ॥

ಕೂಡಿದ ಹಸಿಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೧॥

ಪ್ರೀತಿಯ ಸಿರಿವೀಣೆ ಮೀಟಿದೆ ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖಭೋಗ ಬೇಡಿದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೨॥

Read more...

ಗಾಳಿಗೊಡ್ಡಿದ ದೀಪದಂತೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಗಾಳಿಗೊಡ್ಡಿದ ದೀಪದಂತೆ ನಮ್ಮ ಬಾಳುವೆ ।
ಆಗಲೋ ಈಗಲೋ ಆರುವ ತೀರುವ ಬಾಳುವೆ ॥

ಯಾರಿಗು ನಾಳೆ ಹಾದಿ ಹೇಗೋ ಏನೋ ಗೊತ್ತಿಲ್ಲ
ಕಾಲದ ಅಂಕೆ ತಪ್ಪಿ ಯಾರೂ ಎಲ್ಲೂ ಉಳಿದಿಲ್ಲ
ಮುಗಿಯದ ಲೋಕದ ಪಯಣವೆಂದೂ ಬಂಧವೇ ॥೧॥

ರಾಗವು ಗಂಗೆಯಾಗಿ ಹರಿದಂತೆಲ್ಲ ಸಂಗವೇ
ಭೋಗವು ಮೈಯಲ್ಲೂರಿ ಬೆಳೆದಂತೆಲ್ಲ ಕೆಂಡವೇ
ಜಗದೊಳು ನಡೆದಿದೆ ರಾಗ ಭೋಗದ ಆಟವೇ ॥೨॥

Read more...

ಯಾರಿಗುಂಟು ಯಾರಿಗಿಲ್ಲ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಯಾರಿಗುಂಟು ಯಾರಿಗಿಲ್ಲ
ಬಾಳೆಲ್ಲ ಬೇವು ಬೆಲ್ಲ ।
ಬಂದದೆಲ್ಲ ನೀಸಬೇಕಯ್ಯಾ ಗೆಣೆಯಾ
ಕಾಣದಕ್ಕೆ ಚಿಂತೆ ಯಾಕಯ್ಯಾ
ಗೋಣು ಹಾಕಿ ಕೂಡಬ್ಯಾಡ
ಗತ್ತಿನಾಗೆ ಬಾಳ ನೋಡ ॥

ಏಳು ಬೀಳು ಇರುವುದೇನೇ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪು ಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗಬೇಕಯ್ಯಾ, ಓ ಗೆಣೆಯಾ
ಕೈಯ ಚಲ್ಲಿ ಕೊರಗಬೇಡಯ್ಯಾ॥೧॥

ಪ್ರೀತಿ ಪ್ರೇಮ ನಡೆದಾ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದು ಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯಾ, ಓ ಗೆಣೆಯಾ
ಕಣ್ಣು ತೆರೆದು ಲೋಕ ನೋಡಯ್ಯಾ ॥೨॥

Read more...

ಮುಂಜಾನೆ ಮಂಜೆಲ್ಲ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮುಂಜಾನೆ ಮಂಜೆಲ್ಲ ಚಂದಾಗೈತೆ ।
ಸಂಗಾತಿ ತುಟಿಯಂಗೆ
ಹವಳಾದ ಮಣಿಯಂಗೆ
ಹೊಳಪಾಗೈತೆ ॥

ಸಂಪಿಗೆ ತೂಗಿ ಚೆಂಡ್ಹೂವು ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದಂಗೈತೆ ॥೧॥

ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರದಂಗೈತೆ ॥೨॥

Read more...

ಸುಗ್ಗಿ ವ್ಯಾಳೆಗೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಸುಗ್ಗಿ ವ್ಯಾಳೆಗೆ ।
ಸೊಬಗೇ ಸುತ್ತ ಕಂಡು ಭೂಮಿ ಬೀಗೈತೆ
ಬವಣೆ ನೀಗೈತೆ ॥

ರಾಗಿ ಹೊಲಗಳು ತೂಗುವ ಹೊನಪಿಗೆ ಬೆಡಗೇ ಮಿಂಚೈತೆ
ಹುಚ್ಚೆಳ್ಳು ಸಾಸಿವೆ ಅವರೆ ಸೊಗಡು ಕಂಪು ಹರಡೈತೆ
ಕಡಲೆ ಕಬ್ಪು ಹೋಬಾಗಿ ಬೆಳೆದು ರಾಶಿ ಬಿದ್ದೈತೆ
ಜೋಳ ನವಣೆ ಹುರುಳಿ ತೊಗರಿ ಕಣ್ಣು ಚುಚ್ಚೈತೆ ॥೧॥

ವರುಷ ಪೂರ ದುಡಿದ ಜನಕೆ ಫಸಲು ದಕ್ಕೈತೆ
ಕೇಕೆ ಹಾಕೋ ರೈತರಂಗಿಗೆ ರಾಗ ಉಕ್ಕೈತೆ
ಹಸಿರು ಬಯಸೋ ರಾಸುಗಳಿಗೆ ಮೇವು ಸಿಕ್ಕೈತೆ
ಕಾಳು ಕಡ್ಡಿ ಹುಡುಕೋ ಹಕ್ಕಿಗೆ ಹಸಿವು ತಣಿದೈತೆ ॥೨॥

Read more...

ಚಿತ್ತಾರ ಬಿಡಿಸ್ಯಾವೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಚಿತ್ತಾರ ಬಿಡಿಸ್ಯಾವೆ ಮುಂಗಾರ ಮಳೆ ಮೋಡ ।
ಒತ್ತಾಗಿ ಮುಗಿಲಾಗೆ ನಿಂತಾವೆ ಮುತ್ತಾಗೆ
ರೈತಾಪಿ ಹೈದರಿಗೆ ತೆರೆದಾವೆ ಹಾದಿ ನೋಡ ॥

ಬಾಯಿ ಬಿಟ್ಟು ಕಾದೈತೆ ಬೆಂಗಾಡು ಬಿರುಭೂಮಿ
ಕತ್ತೆತ್ತಿ ನೋಡ್ಯಾವೆ ಕಂಗೆಟ್ಟ ಕಾಡುಹಕ್ಕಿ
ಸುತ್ತೆಲ್ಲ ಬಳಲ್ಯಾವೆ ಬಡವಾದ ಎತ್ತು ಎಮ್ಮೆ
ಮೂಡಲ ಸುಳಿಗಾಳಿ ಬಿಡಿಸೈತೆ ಜೀವಭಾವ ॥೧॥

ಗಿಡ ಬಳ್ಳಿ ನಲುಗ್ಯಾವೆ ಹೂರೆಂಬೆ ಬಲು ಬೆಂಡು
ಒಡ್ಡೆಲ್ಲ ಒಣಗ್ಯಾವೆ ನೀರಿರದೆ ತಳವ ಕಂಡು
ಹಾದ್ಯಲ್ಲ ಸುಡುತಾವೆ ಧೂಳನ್ನೆ ಹೊದ್ದುಕೊಂಡು
ನೇಗಿಲ ಹೊನ್ನಾರು ಬಯಸೈತೆ ಮಣ್ಣ ಕಂಡು ॥೨॥

Read more...

Popular Posts