Pages

Showing posts with label ಕನಕದಾಸ. Show all posts
Showing posts with label ಕನಕದಾಸ. Show all posts

ನಾನು ನೀನು ಎನ್ನದಿರು

Sunday, 20 May 2018

ಸಾಹಿತ್ಯ-ಕನಕದಾಸ


ನಾನು ನೀನು ಎನ್ನದಿರು ಹೀನ ಮಾನವ ।
ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡೆಲೋ, ಪ್ರಾಣಿ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ ।
ಅನ್ನದಿಂದ ಬಂದ ಕಾಮ ನಿನ್ನದೇನೆಲೋ ।
ಕರ್ಣದಿಂದ ಬರುವ ಘೋಷ ನಿನ್ನದೇನೆಲೋ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೋ, ಪ್ರಾಣಿ ॥೧॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ।
ಜಾಲವಿದ್ಯೆ ಬಯಲು ಮಾಯೆ ನಿನ್ನದೇನೆಲೋ ।
ಕೀಲು ಜಡಿದ ಮರದ ಗೊಂಬೆ ನಿನ್ನದೇನೆಲೋ ।
ಲೋಲ ಆದಿಕೇಶವನ ಭಕ್ತನಾಗೆಲೋ ಪ್ರಾಣಿ ॥೨॥

Read more...

ನಮ್ಮಮ್ಮ ಶಾರದೆ

Tuesday, 1 March 2016

ಸಾಹಿತ್ಯ-ಕನಕದಾಸ


ನಮ್ಮಮ್ಮ ಶಾರದೆ ಉಮಾಮಹೇಶ್ವರಿ, ನಿಮ್ಮೊಳಗಿಹನಾರಮ್ಮಾ ।
ಕಮ್ಮಗೋಲನವೈರಿ ಸುತನಾದ ಸೊಂಡಿಲ, ಹೆಮ್ಮೆಯ ಗಣನಾಥನೇ ॥

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ ।
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾಗಣನಾಥನೇ ॥೧॥

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ ।
ಪಟ್ಟದರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ॥೨॥

ರಾಶಿವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ ।
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ ॥೩॥

Read more...

ಸತ್ಯವಂತರ ಸಂಗವಿರಲು ತೀರ್ಥವೇತಕೆ

ಸಾಹಿತ್ಯ-ಕನಕದಾಸ


ಸತ್ಯವಂತರ ಸಂಗವಿರಲು ತೀರ್ಥವೇತಕೆ ।
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ ॥

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನಹೀನನಾಗಿ ಬಾಳ್ವ ಮನುಜನೇತಕೆ ।
ಜ್ಞಾನವಿಲ್ಲದೇ ನೂರುಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ ॥೧॥

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ ।
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ ॥೨॥

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ ।
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿಕೇಶವನಲ್ಲದ ದೈವವೇತಕೆ ॥೩॥

Read more...

ನೀ ಮಾಯೆಯೊಳಗೋ

ಸಾಹಿತ್ಯ-ಕನಕದಾಸ


ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ।
ನೀ ದೇಹದೊಳಗೋ ನಿನ್ನೊಳು ದೇಹವೋ ॥

ಬಯಲು ಆಲಯದೊಳಗೋ ಆಲಯವು ಬಯಲೊಳಗೋ
ಬಯಲು ಆಲಯವೆರಡು ನಯನದೊಳಗೋ ।
ನಯನ ಬುದ್ಧಿಯೊಳಗೋ ಬುದ್ಧಿ ನಯನದೊಳಗೋ
ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೇ ॥1॥

ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೋ ।
ಜಿಹ್ವೆ ಮನಸಿನೊಳಗೋ ಮನಸು ಜಿಹ್ವೆಯೊಳಗೋ
ಜಿಹ್ವೆ ಮನಸುಗಳೆರಡು ನಿನ್ನೊಳಗೋ ಹರಿಯೇ ॥2॥

ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ
ಕುಸುಮ ಗಂಧಗಳೆರಡು ಆಘ್ರಾಣದೊಳಗೋ ।
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೇ ॥3॥

Read more...

ನೋಡಿ ಮರುಳಾಗದಿರು ಪರಸತಿಯರ

Friday, 5 March 2010

ಸಾಹಿತ್ಯ-ಕನಕದಾಸ


ನೋಡಿ ಮರುಳಾಗದಿರು ಪರಸತಿಯರ
ನಾಡೊಳಗೆ ಕೆಟ್ಟವರ ಪರಿಯ ನೀನರಿತು ॥

ಶತಮುಖವನೆ ಮಾಡಿ ಸುರಸಭೆಗೈದ ನಹುಷ ತಾ
ಆತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿಬೇಗ ಚಲಿಸೆಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು ॥೧॥

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯವೇಷ ಧರಿಸಿ ಬಂದು
ಪರಮ ಮುನಿಶಾಪದಿಂ ಅಂಗದೊಳು
ಸಾವಿರ ಕಣ್ಣಾಗಿ ಇದ್ದ ಪರಿಯ ನೀನರಿತು ॥೨॥

ಸ್ಮರನ ಶರತಾಪವನು ಪರಿಹರಿಸಲರಿಯದಲೆ
ದುರುಳ ಕೀಚಕನು ದ್ರೌಪದಿಯ ಕೆಣಕಿ
ಮರುತಸುತ ಭೀಮನಿಂದಿರುಳೊಳಗೆ ಹತನಾದ
ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ ॥೩॥

ಹರನ ವರವನು ಪಡೆದು ಶರಧಿಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು ॥೩॥

ಇಂಥಿಂಥವರು ಕೆಟ್ಟು ಹೋದವರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ
ನಿರುತವು ನೀ ಭಜಿಸಿ ಸುಖಿಯಾಗೋ ಮನುಜ ॥೪॥

Read more...

ಈಶ ನಿನ್ನ ಚರಣ ಭಜನೆ (ಕೇಶವಾದಿ ನಾಮಗಳು)

Tuesday, 7 July 2009

ಸಾಹಿತ್ಯ-ಕನಕದಾಸ


ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುನೆನು
ದೋಷರಾಶಿ ನಾಶ ಮಾಡು ಶ್ರೀಶ ಕೇಶವ ॥

ಶರಣು ಹೊಕ್ಕೆನಯ್ಯ ಎನ್ನ
ಮರಣಸಮಯದಲ್ಲಿ ನಿನ್ನ
ಚರಣಸ್ಮರಣೆ ಕರುಣಿಸಯ್ಯ
ನಾರಾಯಣ ॥೧॥

ಶೋಧಿಸೆನ್ನ ಭವದಿ ಕಲುಷ
ಬೋಧಿಸಯ್ಯ ಙ್ಞಾನವೆನಗೆ
ಬಾಧಿಸುವ ಯಮನ ಬಾಧೆ
ಬಿಡಿಸು ಮಾಧವಾ ॥೨॥

ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ
ತಂದೆ ಗೋವಿಂದಾ ॥೩॥

ಭ್ರಷ್ಟನೆನಿಸಬೇಡ ಕೃಷ್ಣ
ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಚ
ಬಿಡಿಸು ವಿಷ್ಣುವೇ ॥೪॥

ಮದನನಯ್ಯ ನಿನ್ನ ಮಹಿಮೆ
ವದನದಿಂದ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ
ಮಧುಸೂದನ ॥೫॥

ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ
ಶ್ರೀ ತ್ರಿವಿಕ್ರಮ ॥೬॥

ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ
ಸ್ವಾಮಿ ವಾಮನ ॥೭॥

ಮೊದಲು ನಿನ್ನ ಪಾದಪೂಜೆ
ಒದಗುವಂತೆ ಮಾಡು ಎನ್ನ
ಹೃದಯದೊಳಗೆ ಸದನ ಮಾಡು
ಮುದದಿ ಶ್ರೀಧರ ॥೮॥

ಹುಸಿಯನಾಡಿ ಹೊಟ್ಟೆ ಹೊರುವ
ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋಎನ್ನ
ಹೃಷೀಕೇಶನೇ ॥೯॥

ಬಿದ್ದು ಭವದನೇಕ ಜನುಮ
ಬಧ್ಧನಾಗಿ ಕಲುಷದಿಂದ
ಗೆದ್ದು ಪೋಪ ಬುದ್ಧಿ
ತೋರೋ ಪದ್ಮನಾಭನೇ ॥೧೦॥

ಕಾಮಕ್ರೋಧ ಬಿಡಿಸಿ ನಿನ್ನ
ನಾಮ ಜಿಹ್ವೆಯೊಳಗೆ ನುಡಿಸೋ
ಶ್ರೀಮಹಾನುಭಾವನಾದ
ದಾಮೋದರ ॥೧೧॥

ಪಂಕಜಾಕ್ಷ ನೀನು ಎನ್ನ
ಮಂಕುಬುಧ್ಧಿಯನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ
ಸಂಕರ್ಷಣ ॥೧೨॥

ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು
ವಾಸುದೇವನೆ ॥೧೩॥

ಬುಧ್ಧಿಶೂನ್ಯನಾಗಿ ಎನ್ನ
ಬಧ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುಧ್ಧ ಮಾಡೋ
ಪ್ರದ್ಯುಮ್ನನೇ ॥೧೪॥

ಜನನಿ ಜನಕ ನೀನೆಯೆಂದು
ನೆನೆವನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿಂದು
ಅನಿರುಧ್ಧನೇ ॥೧೫॥

ಹರುಷದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ
ಪುರುಷೋತ್ತಮ ॥೧೬॥

ಸಾಧುಸಂಗ ಕೊಟ್ಟು ನಿನ್ನ
ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರು
ಹೇ ಅಧೋಕ್ಷಜ ॥೧೭॥

ಚಾರುಚರಣ ತೋರಿ ಎನಗೆ
ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ
ನಾರಸಿಂಹನೇ ॥೧೮॥

ಸಂಚಿತಾದಿ ಪಾಪಗಳು
ಕಿಂಚಿತಾದಿ ಪೀಡೆಗಳು
ಮುಂಚಿತಾಗೆ ಕಳೆಯಬೇಕೋ
ಸ್ವಾಮಿ ಅಚ್ಯುತ ॥೧೯॥

ಙ್ಞಾನಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುಧ್ಧಿ ಬಿಡಿಸೋ ಮುನ್ನ
ಶ್ರೀ ಜನಾರ್ದನ ॥೨೦॥

ಜಪತಪಾನುಷ್ಠಾನವಿಲ್ಲ
ಕುಪಥಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು
ಹೇ ಉಪೇಂದ್ರನೇ ॥೨೧॥

ಮೊರೆಯ ಇಡುವೆನಯ್ಯ ನಿನಗೆ
ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮ-
-ಪುರುಷ ಶ್ರೀಹರೇ ॥೨೨॥

ಪುಟ್ಟಿಸಲೇ ಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ
ಶ್ರೀಕೃಷ್ಣನೇ ॥೨೩॥

ಸತ್ಯವಾದ ನಾಮಗಳನು
ನಿತ್ಯದಲ್ಲಿ ಪಠಿಸುವವರಿಗೆ
ಅರ್ಥಿಯಿಂದ ಸಲಹುತಿರುವ
ಕರ್ತೃ ಕೇಶವ ॥೨೪॥

ಮರೆಯದಲೇ ಹರಿಯ ನಾಮ
ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆ-
-ಯಾದಿಕೇಶವ ॥೨೫॥

Read more...

ತೊರೆದು ಜೀವಿಸಬಹುದೇ

Friday, 10 October 2008

ಸಾಹಿತ್ಯ-ಕನಕದಾಸ


ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ।
ಬರಿಯ ಮಾತೇಕಿನ್ನು ಅರಿತು ಪೇಳ್ವೆನು ನಾನು ॥

ತಾಯಿ ತಂದೆಯ ಬಿಟ್ಟು ತಪವು ಮಾಡಲುಬಹುದು ।
ದಾಯಾದಿ ಬಂಧುಗಳ ಅಗಲ ಬಹುದು ।
ರಾಯ ಮುನಿದರೆ ಮತ್ತೆ ರಾಜ್ಯವ ಬಿಡಬಹುದು ।
ತೋಯಜಾಕ್ಷನಂಘ್ರಿ ಘಳಿಗೆ ಬಿಡಲಾಗದೋ ॥೧॥

ಒಡಲು ಹಸಿದರೆ ಅನ್ನವಿಲ್ಲದೆ ಇರಬಹುದು ।
ಪಡೆದ ಕ್ಷೇತ್ರವ ಬಿಟ್ಟು ತೆರಳಬಹುದು ।
ಮಡದಿ ಮಕ್ಕಳ ಬಿಟ್ಟು ಅಡವಿ ಸೇರಲುಬಹುದು ।
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದೋ ॥೨॥

ಪ್ರಾಣವನು ಬೇಡಿದರೆ ಕೈಯ್ಯೆತ್ತಿ ಕೊಡಬಹುದು ।
ಮಾನಾಪಮಾನಗಳ ಸಹಿಸಬಹುದು ।
ಪ್ರಾಣನಾಯಕನಾದ ಆದಿಕೇಶವರಾಯ ।
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೋ ॥೩॥

Read more...

Popular Posts