ಸಕಲ ಗ್ರಹಬಲ ನೀನೇ
Tuesday, 1 March 2016
ಸಾಹಿತ್ಯ-ಪುರಂದರದಾಸ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ ।
ನಿಖಿಲರಕ್ಷಕ ನೀನೆ ವಿಶ್ವವ್ಯಾಪಕನೇ ॥
ರವಿ ಚಂದ್ರ ಬುಧ ನೀನೇ ರಾಹುಕೇತುವು ನೀನೇ
ಕವಿ ಗುರು ಶನಿಯು ಮಂಗಳನು ನೀನೇ ।
ದಿವರಾತ್ರಿಯು ನೀನೇ ನವವಿಧಾನವು ನೀನೇ
ಭವರೋಗಹರ ನೀನೇ ಭೇಷಜನು ನೀನೇ ॥೧॥
ಪಕ್ಷಮಾಸವು ನೀನೇ ಪರ್ವಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ ।
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ॥೨॥
ಋತುವತ್ಸರವು ನೀನೆ ಪ್ರತಿಯುಗಾದಿಯು ನೀನೇ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ ।
ಜಿತವಾಗಿ ಎನ್ನೊಡೆಯ ಪುರಂದರವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮಮಹಿಮನು ನೀನೇ ॥೩॥
0 comments:
Post a Comment