Pages

ಈಶ ನಿನ್ನ ಚರಣ ಭಜನೆ (ಕೇಶವಾದಿ ನಾಮಗಳು)

Tuesday 7 July 2009

ಸಾಹಿತ್ಯ-ಕನಕದಾಸ


ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುನೆನು
ದೋಷರಾಶಿ ನಾಶ ಮಾಡು ಶ್ರೀಶ ಕೇಶವ ॥

ಶರಣು ಹೊಕ್ಕೆನಯ್ಯ ಎನ್ನ
ಮರಣಸಮಯದಲ್ಲಿ ನಿನ್ನ
ಚರಣಸ್ಮರಣೆ ಕರುಣಿಸಯ್ಯ
ನಾರಾಯಣ ॥೧॥

ಶೋಧಿಸೆನ್ನ ಭವದಿ ಕಲುಷ
ಬೋಧಿಸಯ್ಯ ಙ್ಞಾನವೆನಗೆ
ಬಾಧಿಸುವ ಯಮನ ಬಾಧೆ
ಬಿಡಿಸು ಮಾಧವಾ ॥೨॥

ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ
ತಂದೆ ಗೋವಿಂದಾ ॥೩॥

ಭ್ರಷ್ಟನೆನಿಸಬೇಡ ಕೃಷ್ಣ
ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಚ
ಬಿಡಿಸು ವಿಷ್ಣುವೇ ॥೪॥

ಮದನನಯ್ಯ ನಿನ್ನ ಮಹಿಮೆ
ವದನದಿಂದ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ
ಮಧುಸೂದನ ॥೫॥

ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ
ಶ್ರೀ ತ್ರಿವಿಕ್ರಮ ॥೬॥

ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ
ಸ್ವಾಮಿ ವಾಮನ ॥೭॥

ಮೊದಲು ನಿನ್ನ ಪಾದಪೂಜೆ
ಒದಗುವಂತೆ ಮಾಡು ಎನ್ನ
ಹೃದಯದೊಳಗೆ ಸದನ ಮಾಡು
ಮುದದಿ ಶ್ರೀಧರ ॥೮॥

ಹುಸಿಯನಾಡಿ ಹೊಟ್ಟೆ ಹೊರುವ
ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋಎನ್ನ
ಹೃಷೀಕೇಶನೇ ॥೯॥

ಬಿದ್ದು ಭವದನೇಕ ಜನುಮ
ಬಧ್ಧನಾಗಿ ಕಲುಷದಿಂದ
ಗೆದ್ದು ಪೋಪ ಬುದ್ಧಿ
ತೋರೋ ಪದ್ಮನಾಭನೇ ॥೧೦॥

ಕಾಮಕ್ರೋಧ ಬಿಡಿಸಿ ನಿನ್ನ
ನಾಮ ಜಿಹ್ವೆಯೊಳಗೆ ನುಡಿಸೋ
ಶ್ರೀಮಹಾನುಭಾವನಾದ
ದಾಮೋದರ ॥೧೧॥

ಪಂಕಜಾಕ್ಷ ನೀನು ಎನ್ನ
ಮಂಕುಬುಧ್ಧಿಯನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ
ಸಂಕರ್ಷಣ ॥೧೨॥

ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು
ವಾಸುದೇವನೆ ॥೧೩॥

ಬುಧ್ಧಿಶೂನ್ಯನಾಗಿ ಎನ್ನ
ಬಧ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುಧ್ಧ ಮಾಡೋ
ಪ್ರದ್ಯುಮ್ನನೇ ॥೧೪॥

ಜನನಿ ಜನಕ ನೀನೆಯೆಂದು
ನೆನೆವನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿಂದು
ಅನಿರುಧ್ಧನೇ ॥೧೫॥

ಹರುಷದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ
ಪುರುಷೋತ್ತಮ ॥೧೬॥

ಸಾಧುಸಂಗ ಕೊಟ್ಟು ನಿನ್ನ
ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರು
ಹೇ ಅಧೋಕ್ಷಜ ॥೧೭॥

ಚಾರುಚರಣ ತೋರಿ ಎನಗೆ
ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ
ನಾರಸಿಂಹನೇ ॥೧೮॥

ಸಂಚಿತಾದಿ ಪಾಪಗಳು
ಕಿಂಚಿತಾದಿ ಪೀಡೆಗಳು
ಮುಂಚಿತಾಗೆ ಕಳೆಯಬೇಕೋ
ಸ್ವಾಮಿ ಅಚ್ಯುತ ॥೧೯॥

ಙ್ಞಾನಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುಧ್ಧಿ ಬಿಡಿಸೋ ಮುನ್ನ
ಶ್ರೀ ಜನಾರ್ದನ ॥೨೦॥

ಜಪತಪಾನುಷ್ಠಾನವಿಲ್ಲ
ಕುಪಥಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು
ಹೇ ಉಪೇಂದ್ರನೇ ॥೨೧॥

ಮೊರೆಯ ಇಡುವೆನಯ್ಯ ನಿನಗೆ
ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮ-
-ಪುರುಷ ಶ್ರೀಹರೇ ॥೨೨॥

ಪುಟ್ಟಿಸಲೇ ಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ
ಶ್ರೀಕೃಷ್ಣನೇ ॥೨೩॥

ಸತ್ಯವಾದ ನಾಮಗಳನು
ನಿತ್ಯದಲ್ಲಿ ಪಠಿಸುವವರಿಗೆ
ಅರ್ಥಿಯಿಂದ ಸಲಹುತಿರುವ
ಕರ್ತೃ ಕೇಶವ ॥೨೪॥

ಮರೆಯದಲೇ ಹರಿಯ ನಾಮ
ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆ-
-ಯಾದಿಕೇಶವ ॥೨೫॥

0 comments:

Popular Posts