Pages

ಭಂಡನಾದೆನು ನಾನು

Tuesday 1 March 2016

ಸಾಹಿತ್ಯ-ಪುರಂದರದಾಸ


ಭಂಡನಾದೆನು ನಾನು ಸಂಸಾರದಿ ।
ಕಂಡೂ ಕಾಣದ ಹಾಗೆ ಇರಬಹುದೆ ಹರಿಯೆ ॥

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ ।
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ ॥೧॥

ನಾನಾವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ ।
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ ॥೨॥

ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟುಹೋಯ್ತು ।
ಉದ್ಧಾರಕ ಪುರಂದರವಿಠಲನ ತತ್ತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ ॥೩॥

Read more...

ಸಕಲ ಗ್ರಹಬಲ ನೀನೇ

ಸಾಹಿತ್ಯ-ಪುರಂದರದಾಸ


ಸಕಲ ಗ್ರಹಬಲ ನೀನೇ ಸರಸಿಜಾಕ್ಷ ।
ನಿಖಿಲರಕ್ಷಕ ನೀನೆ ವಿಶ್ವವ್ಯಾಪಕನೇ ॥

ರವಿ ಚಂದ್ರ ಬುಧ ನೀನೇ ರಾಹುಕೇತುವು ನೀನೇ
ಕವಿ ಗುರು ಶನಿಯು ಮಂಗಳನು ನೀನೇ ।
ದಿವರಾತ್ರಿಯು ನೀನೇ ನವವಿಧಾನವು ನೀನೇ
ಭವರೋಗಹರ ನೀನೇ ಭೇಷಜನು ನೀನೇ ॥೧॥

ಪಕ್ಷಮಾಸವು ನೀನೇ ಪರ್ವಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ ।
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ॥೨॥

ಋತುವತ್ಸರವು ನೀನೆ ಪ್ರತಿಯುಗಾದಿಯು ನೀನೇ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ ।
ಜಿತವಾಗಿ ಎನ್ನೊಡೆಯ ಪುರಂದರವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮಮಹಿಮನು ನೀನೇ ॥೩॥

Read more...

ಬದುಕಿದೆನು ಬದುಕಿದೆನು

ಸಾಹಿತ್ಯ-ಪುರಂದರದಾಸ


ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ।
ಪದುಮನಾಭನ ಪಾದದೊಲುಮೆ ಎನಗಾಯಿತು ॥

ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ।
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ॥೧॥

ಹರಿಯ ತೀರ್ಥಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ ।
ಹರಿದಾಸರು ಎನ್ನ ಬಂಧು ಬಳಗಾವಾದರು
ಹರಿಮುದ್ರೆ ಎನಗಾಭರಣವಾಯಿತು ॥೨॥

ಹಿಂದೆನ್ನ ಸಂತತಿಗೆ ಸಕಲಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು ।
ತಂದೆ ಪುರಂದರವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ॥೩॥

Read more...

ಏನು ಧನ್ಯಳೋ ಲಕುಮಿ

ಸಾಹಿತ್ಯ-ಪುರಂದರದಾಸ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ।
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ॥

ಕೋಟಿ ಕೋಟಿ ಭೃತ್ಯರಿರಲು, ಹಾಟಕಾಂಬರನ ಸೇವೆ ।
ಸಾಟಿಯಿಲ್ಲದೆ ಮಾಡಿ ಪೂರ್ಣನೋಟದಿಂದ ಸುಖಿಸುತಿಹಳು ॥೧॥

ಛತ್ರಚಾಮರ ವ್ಯಜನ ಪರಿಯಂಕ ಪಾತ್ರರೂಪದಲ್ಲಿ ನಿಂತು ।
ಚಿತ್ರಚರಿತನಾದ ಹರಿಯ | ನಿತ್ಯಸೇವೆ ಮಾಡುತಿಹಳು ॥೨॥

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ ।
ಸರ್ವವಂದ್ಯನಾದ ಪುರಂದರವಿಠಲನ್ನ ಸೇವಿಸುವಳೋ ॥೩॥

Read more...

ಕಂಡೆ ನಾ ಗೋವಿಂದನ

ಸಾಹಿತ್ಯ-ಪುರಂದರದಾಸ


ಕಂಡೆ ನಾ ಗೋವಿಂದನ ।
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ॥

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ ।
ಸಾಸಿರನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ॥೧॥

ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲಜನ ಮುನಿವಂದ್ಯನ ।
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ॥೨॥

ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತಜನ ರಕ್ಷಕನ ।
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ॥೩॥

Read more...

ಇನ್ನೂ ದಯೆ ಬಾರದೇ

ಸಾಹಿತ್ಯ-ಪುರಂದರದಾಸ


ಇನ್ನೂ ದಯೆ ಬಾರದೇ ದಾಸನ ಮೇಲೆ ।
ಪನ್ನಗಶಯನ ಶ್ರೀಪರಮಪುರುಷ ಹರಿಯೇ ॥

ನಾನಾದೇಶಗಳಲ್ಲಿ ನಾನಾಕಾಲಗಳಲ್ಲಿ
ನಾನಾಯೋನಿಗಳಲ್ಲಿ ನೆಲಿದು ಪುಟ್ಟಿ ।
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೆ ಗತಿ ಎಂದು ನಂಬಿದ ದಾಸನ ಮೇಲೆ ॥೧॥

ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ
ದಾನವಾಂತಕ ನಿನಗೆ ದಾನವಿತ್ತೆ ।
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರವಿಠಲನ ದಾಸನ ಮೇಲೆ ॥೨॥

Read more...

ನಮ್ಮಮ್ಮ ಶಾರದೆ

ಸಾಹಿತ್ಯ-ಕನಕದಾಸ


ನಮ್ಮಮ್ಮ ಶಾರದೆ ಉಮಾಮಹೇಶ್ವರಿ, ನಿಮ್ಮೊಳಗಿಹನಾರಮ್ಮಾ ।
ಕಮ್ಮಗೋಲನವೈರಿ ಸುತನಾದ ಸೊಂಡಿಲ, ಹೆಮ್ಮೆಯ ಗಣನಾಥನೇ ॥

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ ।
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾಗಣನಾಥನೇ ॥೧॥

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ ।
ಪಟ್ಟದರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ॥೨॥

ರಾಶಿವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ ।
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ ॥೩॥

Read more...

ಸತ್ಯವಂತರ ಸಂಗವಿರಲು ತೀರ್ಥವೇತಕೆ

ಸಾಹಿತ್ಯ-ಕನಕದಾಸ


ಸತ್ಯವಂತರ ಸಂಗವಿರಲು ತೀರ್ಥವೇತಕೆ ।
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ ॥

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನಹೀನನಾಗಿ ಬಾಳ್ವ ಮನುಜನೇತಕೆ ।
ಜ್ಞಾನವಿಲ್ಲದೇ ನೂರುಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ ॥೧॥

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ ।
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ ॥೨॥

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ ।
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿಕೇಶವನಲ್ಲದ ದೈವವೇತಕೆ ॥೩॥

Read more...

ನೀ ಮಾಯೆಯೊಳಗೋ

ಸಾಹಿತ್ಯ-ಕನಕದಾಸ


ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ।
ನೀ ದೇಹದೊಳಗೋ ನಿನ್ನೊಳು ದೇಹವೋ ॥

ಬಯಲು ಆಲಯದೊಳಗೋ ಆಲಯವು ಬಯಲೊಳಗೋ
ಬಯಲು ಆಲಯವೆರಡು ನಯನದೊಳಗೋ ।
ನಯನ ಬುದ್ಧಿಯೊಳಗೋ ಬುದ್ಧಿ ನಯನದೊಳಗೋ
ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೇ ॥1॥

ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೋ ।
ಜಿಹ್ವೆ ಮನಸಿನೊಳಗೋ ಮನಸು ಜಿಹ್ವೆಯೊಳಗೋ
ಜಿಹ್ವೆ ಮನಸುಗಳೆರಡು ನಿನ್ನೊಳಗೋ ಹರಿಯೇ ॥2॥

ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ
ಕುಸುಮ ಗಂಧಗಳೆರಡು ಆಘ್ರಾಣದೊಳಗೋ ।
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೇ ॥3॥

Read more...

ಕೈಲಾಸವಾಸ ಗೌರೀಶ ಈಶ

ಸಾಹಿತ್ಯ-ವಿಜಯದಾಸ


ಕೈಲಾಸವಾಸ ಗೌರೀಶ ಈಶ ।
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ ॥

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ ।
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣುಭಕುತಿಯನು ಕೊಡು ಶಂಭೋ ॥೧॥

ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ ।
ಧನುಜಗತಮದಹಾರಿ ದಂಡಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನಚರಣಕಮಲದಲ್ಲಿ ಶಂಭೋ ॥೨॥

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ ।
ಭಾಗವತಗಳ ಪ್ರಿಯ ವಿಜಯವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ ॥೩॥

Read more...

ಪವಮಾನ ಪವಮಾನ ಜಗದ ಪ್ರಾಣ

ಸಾಹಿತ್ಯ-ವಿಜಯದಾಸ


ಪವಮಾನ ಪವಮಾನ ಜಗದ ಪ್ರಾಣ
ಸಂಕರುಷಣ ಭವಭಯಾರಣ್ಯದಹನ ।
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರಿಯ ॥

ಹೇಮಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿವರ್ಗರಹಿತ
ವ್ಯೋಮಾದಿಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ।
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನೀ ಮಾಣಿಪುದು ॥೧॥

ವಜ್ರಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರಮಣಿ ದಯಾಪಾರ ವಾರ ಉದಾರ ಸಜ್ಜನರಘಪರಿಹಾರ ।
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ
ಮಾರ್ಜನದಲಿ ಭವವರ್ಜಿತನೆನಿಸೊ ॥೨॥

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದಭಾರತಿರಮಣ
ನೀನೆ ಶರ್ವಾದಿಗೀರ್ವಾಣಾದ್ಯಮರರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿಕೊಡುವದು ಭಾನುಪ್ರಕಾಶ ॥೩॥

Read more...

ಸದಾ ಎನ್ನ ಹೃದಯದಲ್ಲಿ

ಸಾಹಿತ್ಯ-ವಿಜಯದಾಸ


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀಹರಿ ।
ನಾದಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ ॥

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ।
ವೇಣುಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ॥೧॥

ಭಕ್ತಿರಸವೆಂಬೋ ಮುತ್ತುಮಾಣಿಕ್ಯದ ಹರಿವಾಣದಿ ।
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ ॥೨॥

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ।
ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ ॥೩॥


Pandit Bhimsen Joshi performs :

Read more...

Popular Posts