Pages

ನೋಡಿ ಮರುಳಾಗದಿರು ಪರಸತಿಯರ

Friday 5 March 2010

ಸಾಹಿತ್ಯ-ಕನಕದಾಸ


ನೋಡಿ ಮರುಳಾಗದಿರು ಪರಸತಿಯರ
ನಾಡೊಳಗೆ ಕೆಟ್ಟವರ ಪರಿಯ ನೀನರಿತು ॥

ಶತಮುಖವನೆ ಮಾಡಿ ಸುರಸಭೆಗೈದ ನಹುಷ ತಾ
ಆತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿಬೇಗ ಚಲಿಸೆಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು ॥೧॥

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯವೇಷ ಧರಿಸಿ ಬಂದು
ಪರಮ ಮುನಿಶಾಪದಿಂ ಅಂಗದೊಳು
ಸಾವಿರ ಕಣ್ಣಾಗಿ ಇದ್ದ ಪರಿಯ ನೀನರಿತು ॥೨॥

ಸ್ಮರನ ಶರತಾಪವನು ಪರಿಹರಿಸಲರಿಯದಲೆ
ದುರುಳ ಕೀಚಕನು ದ್ರೌಪದಿಯ ಕೆಣಕಿ
ಮರುತಸುತ ಭೀಮನಿಂದಿರುಳೊಳಗೆ ಹತನಾದ
ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ ॥೩॥

ಹರನ ವರವನು ಪಡೆದು ಶರಧಿಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು ॥೩॥

ಇಂಥಿಂಥವರು ಕೆಟ್ಟು ಹೋದವರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ
ನಿರುತವು ನೀ ಭಜಿಸಿ ಸುಖಿಯಾಗೋ ಮನುಜ ॥೪॥

0 comments:

Popular Posts