Pages

ಬೇನೆ ತಾಳಲಾರೆ ಬಾ

Friday, 5 March 2010

ಸಾಹಿತ್ಯ-ಪುರಂದರದಾಸ


ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು ॥

ಬೇಳೆ ಬೆಲ್ಲವ ತಂದು, ಹೋಳಿಗೆಯನು ಮಾಡಿ, ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ,
ಹಾಲು ಸಕ್ಕರೆ ಹದ ಮಾಡಿ ತಂದಿಡು, ಎರಕದ ಗಿಂಡಿಲಿ ನೀರ ತಾರೊ ಗಂಡ ॥೧॥

ಗಸಗಸೆ ಲಡ್ಡಿಗೆ, ಹಸನಾದ ಕೆನೆ ಹಾಲು, ಬಿಸಿಯ ಹುರಿಗಡಲೆ, ಬಿಳಿಯ ಬೆಲ್ಲ,
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷವಿಷವೆಂದು ನಾ ತಿಂಬೆನೊ ॥೨॥

ಹಪ್ಪಳ ಕರಿದಿಡು, ಸಂಡಿಗೆ ಹುರಿದಿಡು, ತುಪ್ಪದಿ ನಾಲ್ಕು ಚಕ್ಕುಲಿ ಕರಿದು,
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು, ಬಚ್ಚಲಿಗೆ ಬರುತೇನೆ ನೀರ ಹದಮಾಡೊ ॥೩॥

ಎಣ್ಣೆ ಬದನೆಕಾಯಿ, ಬೆಣ್ಣೆ ಸಜ್ಜಿಯ ರೊಟ್ಟಿ, ಸಣ್ಣಕ್ಕಿಬೋನ ಬದಿಯಲಿಟ್ಟು,
ಸಣ್ಣ ತುಂಚಿಯ ಲಿಂಬೆ, ಲಲಮಾಗಡಿಬೇರು, ಉಣ್ಣುಣ್ಣು ಎಂದರೆ ಉಂಬೆನೊ ಗಂಡ ॥೪॥

ಗಂಧ ಕುಂಕುಮವನು ಬದಿಯಲಿ ತಂದಿಡು, ಮಡಿಯಲಿ ತಂಬಿಗೆ ನೀರ ತಾರೋ,
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು, ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ ॥೫॥

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ,
ಸ್ನಾನ ಮಾಡಿಕೊಂಡು, ಸೀರೆಯ ತೆಕ್ಕೊಟ್ಟು, ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ ॥೬॥

ಸಣ್ಣ ನುಚ್ಚು ಇಟ್ಟುಕೊ, ಗೊಡ್‍ಹುಳಿ ಕಾಸಿಕೊ, ದೊನ್ನೆಯೊಳಗೆ ತುಪ್ಪ ಬಡಿಸಿಕೊ,
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ ॥೭॥

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ ॥೮॥

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಠ್ಠಲನ ನೆನೆವುತ ನೀನೊಂದು ಮೂಲೇಲಿ ಬಿದ್ದುಕೊಳ್ಳೋ ಗಂಡ ॥೯॥

0 comments:

Popular Posts