ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ
Monday, 8 February 2016
ಸಾಹಿತ್ಯ-ಪುರಂದರದಾಸ
ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ, ಮಡಿ ಮಾಡುವ ಬಗೆ ಬೇರುಂಟು ।
ಪೊಡವಿ ಪಾಲಕನ ಪಾದಧ್ಯಾನವನು, ಬಿಡದೆ ಮಾಡುವುದದು ಮಡಿಯು ॥
ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ।
ಹೊಟ್ಟೆಯೊಳಗಿನ ಕಾಮ-ಕ್ರೋಧ-ಮದ-ಮತ್ಸರ ಬಿಟ್ಟು ನಡೆದರೆ ಅದು ಮಡಿಯು ॥೧॥
ದಶಮಿ-ದ್ವಾದಶಿ ಪುಣ್ಯದಿನದಲಿ ವಸುದೇವಸುತನನು ಪೂಜಿಸದೆ ।
ದೋಷಕಂಜದೆ, ಪರರನ್ನ ಭುಂಜಿಸಿ ಯಮಪಾಶಕೆ ಸಿಲುಕುವುದದು ಮಡಿಯೇ ॥೨॥
ಹಸಿದು ಭೂಸುರರು ಮಧ್ಯಾಹ್ನಕಾಲಕೆ ಕುಸಿದು ಮನಗೆ ಬಳಲುತ ಬಂದರೆ ।
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು ॥೩॥
ಇಚ್ಚೆಯಿಂದ ಮಲಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೇ ।
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು ॥೪॥
ಹಿರಿಯರ, ಗುರುಗಳ, ಹರಿದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ ।
ಪರಿಪಾಲಿಸು ಎಂದು ಪುರಂದರವಿಠಲನ ಇರುಳು-ಹಗಲು ಸ್ಮರಿಸುವುದು ಮಡಿಯು ॥೫॥
0 comments:
Post a Comment