ತೊರೆದು ಜೀವಿಸಬಹುದೇ
Friday, 10 October 2008
ಸಾಹಿತ್ಯ-ಕನಕದಾಸ
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ।
ಬರಿಯ ಮಾತೇಕಿನ್ನು ಅರಿತು ಪೇಳ್ವೆನು ನಾನು ॥
ತಾಯಿ ತಂದೆಯ ಬಿಟ್ಟು ತಪವು ಮಾಡಲುಬಹುದು ।
ದಾಯಾದಿ ಬಂಧುಗಳ ಅಗಲ ಬಹುದು ।
ರಾಯ ಮುನಿದರೆ ಮತ್ತೆ ರಾಜ್ಯವ ಬಿಡಬಹುದು ।
ತೋಯಜಾಕ್ಷನಂಘ್ರಿ ಘಳಿಗೆ ಬಿಡಲಾಗದೋ ॥೧॥
ಒಡಲು ಹಸಿದರೆ ಅನ್ನವಿಲ್ಲದೆ ಇರಬಹುದು ।
ಪಡೆದ ಕ್ಷೇತ್ರವ ಬಿಟ್ಟು ತೆರಳಬಹುದು ।
ಮಡದಿ ಮಕ್ಕಳ ಬಿಟ್ಟು ಅಡವಿ ಸೇರಲುಬಹುದು ।
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದೋ ॥೨॥
ಪ್ರಾಣವನು ಬೇಡಿದರೆ ಕೈಯ್ಯೆತ್ತಿ ಕೊಡಬಹುದು ।
ಮಾನಾಪಮಾನಗಳ ಸಹಿಸಬಹುದು ।
ಪ್ರಾಣನಾಯಕನಾದ ಆದಿಕೇಶವರಾಯ ।
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೋ ॥೩॥ Read more...